ಆಗುಂಬೆ To ಶೃಂಗೇರಿ...via ನರಸಿಂಹ ಪರ್ವತ !

ರಾಮನಗರದ ಚಂಡೀಗಢ ಡಾಬನಲ್ಲಿ ಎಲ್ಲರೂ ಸ್ವಲ್ಪ  rich ಆಗೇ ಜೈ ಅಂದಿದ್ದರು. ಇದ್ದ ಜೋಶ್ ನೋಡಿದಾಗ, ಈ ಸಲ  ಟ್ರೆಕ್ಕಿಂಗ್ ಗೆ attendance ಚೆನ್ನಾಗಿರಬಹುದು ಅಂತಾ ಅನ್ನಿಸ್ತು ನಂಗೆ. ಆದರೂ ಸಾಮಾನ್ಯವಾಗಿ ಕೈ ಕೊಡೋ ಸೇಠು, ಸುದೀಪ ಇವರುಗಳ ಬಗ್ಗೆ ಏನೂ ಹೇಳೋಕೆ ಬರೋಲ್ಲ ಅಂತಾನೆ ಇದ್ದೆ.

ಇದಾದ ನಂತರದ ವಾರದಲ್ಲಿ, ಆಗುಂಬೆಗೆ ಫೋನ್ ಮಾಡಿ, ಗೈಡ್ ತಿಮ್ಮಪ್ಪನ ಜೊತೆ ಮಾತಾಡಿ, DySP, ANF ಜೊತೆಗೂ ಒಂದು ಸಲ ಮಾತಾಡಿ ಇಟ್ಟಿದ್ದಾಗಿತ್ತು. ಹೊರಡೋಕೆ ತುಂಬಾ ದಿನಗಳು ಇದ್ದಿದ್ದರಿಂದ ಕೆಲಸದಲ್ಲಿ ಮುಳುಗಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ದೈವಿಕ್ ಬಸ್ ಬುಕಿಂಗ್ ಮಾಡೋ ಕೆಲಸ ವಹಿಸಿಕೊಂಡಿದ್ದ.

ಹೊರಡೋ ಹಿಂದಿನ ದಿನ ಫೋನ್ ಮಾಡಿ, ಎರಡು ಕಾರ್ ಬಿಡದಿಯಿಂದ ಹೊರಡೋದು ಮತ್ತು ಮೈಸೂರು ಡಾಕ್ಟರ್ ಗಳು ಅಲ್ಲಿಂದ ಸೀದಾ ಕಾರ್ ನಲ್ಲಿ ಬರೋ plans ನ fix ಮಾಡಿದ್ರು ನಮ್ಮ ದೈವಿಕ್ bhai. ಕೊನೇಗೆ ಉಳಿದದ್ದು ನಾನು, ನಿಧಿ ಹಾಗು ಇನ್ನೂ confirm ಆಗದೇ ಇರೋ ಕುಮಾರಣ್ಣ. ಇವರಿಬ್ಬರಿಗೂ ಪೂಸಿ ಹೊಡೆದು ಹೇಗೋ ಹೊರಡಿಸಿದ್ದು ಆಯಿತು. ನಿಧಿ ಗೆ pros and cons ವಿವರಿಸಿದ ಮೇಲೆ ಸುಮ್ಮನೆ ಬಸ್ ಬುಕ್ ಮಾಡಿಸು ಮಗಾ ಅಂತಾ green signal ಕೊಟ್ಟ. ಆದರೆ ನಮ್ಮ ಕುಮಾರಣ್ಣ ಕೊನೇ moment ನಲ್ಲಿ ಕಾರ್ ನ ಪುಶ್ ಬ್ಯಾಕ್, ಮ್ಯೂಸಿಕ್ ಎಲ್ಲಾ ಬಿಡೋಕೆ ಮನಸ್ಸಾಗದೆ, scheme ಹಾಕಿ ನನ್ನ Scorpio ಗೂ ಒಂದು ಕಲ್ಲು ಎಸೆದ ಪಾಪ, ಬಿದ್ದರೆ ಬೀಳಲಿ ಅಂತಾ ಆದರೆ work out ಆಗಲಿಲ್ಲ. ಉಳಿದ ನಾನು ಮತ್ತು ನಿಧಿ ಬಸ್ ನಲ್ಲಿ, ಬಾಕಿ ಎಲ್ಲರೂ ಕಾರ್ ನಲ್ಲಿ ಅಂತಾ ಆಗಿತ್ತು. ಆದರೆ ನಿಧಿ ಬರೋದು ಯಾರಿಗೂ ಗೊತ್ತಾಗದ ಹಾಗೆ victoria secret ಆಗೇ ಇರಲಿ ಅಂತಾ ಇಬ್ಬರೂ ಬಾಯಿಗೆ ಬೀಗ ಹಾಕ್ಕೊಂಡು, ಹಾಗೂ ಹೀಗೂ ಆಗುಂಬೆಯಲ್ಲಿ ಲ್ಯಾಂಡ್ ಆಗೋವಾರೆಗೂ  secret maintain ಮಾಡಿದ್ವಿ.

ತುಂಬಾ ದಿನಗಳ ನಂತರ ಫ಼ುಲ್ ಗ್ಯಾಂಗ್ ಜೊತೆ ಹೋಗ್ತಾ ಇರೋದು, ಆಫೀಸಿನಲ್ಲಿ ಕೊನೇ moment ನಲ್ಲಿ ಅಟಕಾಯಿಸಿಕೊಂಡಿದ್ದ  ಅಮೆರಿಕಾ travel plans cancel ಆಗಿದ್ದ ನೆಮ್ಮದಿ, ಈ ಎಲ್ಲಾ ಖುಷಿ ಜೊತೆ trekking ನ excitement ತುಂಬಾನೆ ಜೋರಾಗಿತ್ತು. ಅಮ್ಮ ಹಾಗೂ ರಮ್ಯ ಇಬ್ಬರೂ ಸೇರಿ ಎಲ್ಲಾ ಪ್ಯಾಕಿಂಗ್ ಮಾಡಿ ರೆಡಿ ಇಟ್ಟಿದ್ದರು. ಪ್ರತಿಸಲದ Wildcraft ಬ್ಯಾಗ್ ಬಿಟ್ಟು ಈ ಸಲ SPAN ಬ್ಯಾಗ್ ಗೆ ಶಿಫ್ಹ್ಟ್ ಆಗಿದ್ದೆ :)

ಹುಟ್ಟುಗುಣಕ್ಕೆ ಮೋಸ ಮಾಡಿದರೆ ದೇವರೂ ಮೆಚ್ಚೋಲ್ಲ ಅನ್ನೋದನ್ನ ತುಂಬಾ serious ಆಗಿ ತಗೊಂಡಿರೋ ಧಡಿಯ (ನಿಧಿ), ಕೊನೇವರೆಗೂ ಕಾಡೋ suspense ಫಿಲಂ ಥರಾ, ಬಸ್ ಸ್ಟಾರ್ಟ್ ಆದಾಗ ಬಂದು ಕೂತ್ಕೊಂಡ. ನಾನು ಅವನು ೬ ವರ್ಷದ ಹಿಂದೆ ದೆಹಲಿಯಿಂದ ಜೈಪುರಕ್ಕೆ ಇದೇ ರೀತಿ ಮಾಡಿದ ರಾತ್ರಿ ಪ್ರಯಾಣದ ನೆನಪುಗಳನ್ನು ಮೆಲುಕು ಹಾಕುತ್ತಾ, ಹರಟುತ್ತಾ 'ರಾಜಹಿಂಸೆ' ಬಸ್ಸಿನಲ್ಲಿ ಹೋಗ್ತಾ ಇದ್ವಿ. ಜೊತೆ ಜೊತೆಗೇ ಕಾರ್ ಗಳು ಎಲ್ಲಿವೆ ಅನ್ನೋ ಕುತೂಹಲದ ಫೋನ್ ಕಾಲ್ ಗಳು. ಊಟ ಮನೇಲೇ ಒಂದು ರೌಂಡ್ ಆಗಿದ್ದರೂ, ಮಧ್ಯೆ ಹೋಟೆಲ್ ನಲ್ಲಿ ಚೆನ್ನಾಗಿ ಕತ್ತರಿಸಿದ್ವಿ. ಅಷ್ಟೊತ್ತಿಗೆ ಡ್ರೈವರ್ ರಾಮಣ್ಣ ದೋಸ್ತ್ ಆಗಿ ಹೋಗಿದ್ದರು. ಬಂಡೆನೂ ಬಡಿದು ಮಾತಾಡೋ ಜಾತಿ ನಮ್ಮಿಬ್ಬರದಿದ್ದರಿಂದ, ಇದರಲ್ಲಿ ಆಶ್ಚರ್ಯ ಪಡೋ ವಿಷಯ ಏನೂ ಇರಲಿಲ್ಲ!

ಹಾಗೂ ಹೀಗೂ ೩:೩೦ ವರೆಗೂ ಸರಿಯಾಗೇ ನಿದ್ದೆ ಮಾಡಿದ್ದೆ. ಆಮೇಲೆ, ಡ್ರೈವರ್ ರಾಮಣ್ಣನ ಜೊತೆ cabin ನಲ್ಲಿ ಹರಟುತ್ತಾ, ೪:೧೫ ಕ್ಕೆಲ್ಲಾ ಶಿವಮೊಗ್ಗ ಬಸ್ ಸ್ಟ್ಯಾಂಡ್ ನಲ್ಲಿ ಟೀ ಕುಡಿದು ಪ್ರಯಾಣ ಮುಂದುವರೆಸಿದ್ವಿ. ಬಸ್ ಹಳೇದಾಗಿದ್ದರೂ ಕುದುರೆ ಥರಾ ಓಡುತ್ತಾ ಇತ್ತು. ಜಾಕಿ ರಾಮಣ್ಣನೂ ಸಕ್ಕತಾಗಿ ಬಾರಿಸ್ಕೊಂಡು ಹೋಗ್ತಾ ಇದ್ದ. ತೀರ್ಥಹಳ್ಳಿ ಬಿಟ್ಟು ಆಗುಂಬೆಗೆ ೬:೩೦ ಕ್ಕೆ ತಂದು ಕೆಡವಿದ. ಅಲ್ಲೇ ಹೊಸದಾಗಿ ಆರಂಭವಾಗಿದ್ದ ಮಯೂರ ಹೋಟೆಲ್ ಕಣ್ಣು ಕುಕ್ಕಿ, ಅಲ್ಲೇ ಒಂದು ರೌಂಡ್ ಹಲ್ಲುಜ್ಜಿ ಇಡ್ಲಿ ಕಾಫಿ ಸಮಾರಾಧನೆ ಮಾಡಿ, ದೊಡ್ಡಮನೆ ಕಡೆ ಹೋದ್ವಿ. ಆಚೆ ಪಡಸಾಲೆಯಲ್ಲೇ ಸ್ಲೀಪಿಂಗ್ ಬ್ಯಾಗ್ ಒಳಗೆ ದೈವಿಕ್, ನಿಜಗುಣ, ಸುದೀಪ ನುಸುಳಿಕೊಂಡು ಮಲಗಿದ್ದರು. ನಮ್ಮ victoria secret work out ಆಗಿ ಎಲ್ಲರೂ ಗಾಬರಿ ಹಾಗೂ ಸಂತೋಷದಿಂದ ನನ್ನ ಹಾಗೂ ಧಡಿಯನನ್ನು ಬರಮಾಡಿಕೊಂಡರು.


ದೊಡ್ಡಮನೆ ಬಗ್ಗೆ ಸ್ವಲ್ಪ ಹೇಳಲೇಬೇಕು. ಕಸ್ತೂರಿ ಅಕ್ಕ ಮತ್ತು ಕುಟುಂಬ ಆಗುಂಬೆಯ ಅತಿಥಿ ಸತ್ಕಾರಕ್ಕೆ ಹೆಸರುವಾಸಿ. ಬಂದ ಅತಿಥಿಗಳಿಗೆ ಊಟ ಉಪಚಾರ ಹಾಗೂ ವಸತಿ ವ್ಯವಸ್ಥೆಯನ್ನು ಯಾವುದೇ ಅಪೇಕ್ಷೆಯಿಲ್ಲದೆ ಮಾಡುತ್ತಾರೆ. ಜೊತೆಗೆ ಕೆಲವು ಶಾಲಾ ವಿದ್ಯಾರ್ಥಿ ಗಳಿಗೂ ಸಹಾಯ ಮಾಡಿಕೊಂಡು ಬರುತ್ತಾ ಇದ್ದಾರೆ. ಬಂದ ಅತಿಥಿಗಳು ಅವರಿಗೆ ತೋಚಿದಷ್ಟು ಹಣ ಕೊಟ್ಟು ಬರೋದು ವಾಡಿಕೆಯಾಗಿದೆ.

ನಾವೂ ಕೂಡ ಒಂದು ವಾರ ಮೊದಲೇ ಇವರಿಗೆ ಫೋನ್ ಮಾಡಿ ನಮ್ಮ ಕಾರ್ಯಕ್ರಮ ತಿಳಿಸಿದ್ವಿ. ಹೋದ ತಕ್ಷಣ ಎಲ್ಲರಿಗೂ ಬಿಸಿ ನೀರಿನ ಸ್ನಾನ, ತಿಂಡಿ, ಮಧ್ಯಾಹ್ನಕ್ಕೆ parcel ಊಟದ ವ್ಯವಸ್ಥೆ ಕೂಡ ಆಗಿತ್ತು. ನಮ್ಮ ಗೈಡ್ ತಿಮ್ಮಪ್ಪ ಸಮಯಕ್ಕೆ ಸರಿಯಾಗಿ ಹಾಜರಿದ್ದ. ANF DySP ನ ಭೇಟಿ ಮಾಡಿ ಎಲ್ಲರೂ ಒಂದು ಪತ್ರದಲ್ಲಿ ಸಹಿ ಮಾಡಿ ಹೊರಟಾಗ ಸಮಯ ಹತ್ತು!


ಅಲ್ಲಿಂದ ಮಲ್ಲಂದೂರು ೬ ಕಿ.ಮೀ. ಅಲ್ಲಿ ಗೈಡ್ ತಿಮ್ಮಪ್ಪನ ಮನೆ ಮುಂದೆ ಕಾರ್ ಗಳನ್ನು ನಿಲ್ಲಿಸಿ, ಬ್ಯಾಕ್ ಪ್ಯಾಕ್ ರೆಡಿ ಮಾಡಿಕೊಂಡು ನಡೆಯುವುದು ಶುರು ಆದಾಗ ೧೦:೩೦. ತಿಮ್ಮಪ್ಪ ಆಗಲೇ ಒಂದು ಪೆಗ್ ಏರಿಸಿದ್ದ :). ಮೊದಲ ಅರ್ಧ ಗಂಟೆ ಒಂದು ಮಳೆಗಾಲದ ನೀರಿನ ಝರಿಯ ಹಾದಿಯಲ್ಲಿ ಹತ್ತುವುದು. ಕಲ್ಲು ಬಂಡೆಗಳು, ಅಲ್ಲಲ್ಲಿ ಇಳಿಜಾರು ಕೂಡ. ಆಮೇಲೆ ದಟ್ಟ ಕಾಡು ಶುರು. ಕೆಲವು ಕಡೆ ಹತ್ತುತ್ತಾ ಇದ್ದರೆ, ಕೆಲವು ಕಡೆ ಇಳಿಯುವುದರ ಅನುಭವವೂ ಇತ್ತು. ೧ ಘಂಟೆಗೆ ಸರಿಯಾಗಿ ಬರ್ಕಣ ಜಲಪಾತದ ನೆತ್ತಿಯ ಮೇಲೆ ಬಂದು ತಲುಪಿದ್ವಿ. ಇಲ್ಲಿಂದ ರುದ್ರ ರಮಣೀಯ ದೃಶ್ಯ ನಮ್ಮ ಕಣ್ಣ ಮುಂದೆ. ನೀರು ಹರಿಯುತ್ತ ಒಂದು ಕಣಿವೆಯ ನಡುವೆ ಹರಿದು, ಧುಮ್ಮಿಕ್ಕುತ್ತಾ ಇತ್ತು. ಹಾಲಿವುಡ್ ನ Predator ಸಿನಿಮಾ ನೆನಪಾಗುತ್ತಾ ಇತ್ತು. ಜಲಪಾತದ ನೆತ್ತಿಯ ಪೂರ್ತಿ ದೃಶ್ಯ ನೋಡೋಕೆ ಭಯವೇ ಆಗಿ ಸುಮ್ಮನೆ ಬಂಡೆ ಮೇಲೆ ಕೂತು ತಂದಿದ್ದ ಟೊಮೆಟೊ ಬಾತ್ ತಿನ್ನೋಕೆ ಶುರು ಮಾಡಿದ್ವಿ. ಆದರೂ ನಮ್ಮ ದೈವಿಕ್ ಭಾಯ್ ಹಾಗು ದಯಾನಂದ ವೀರತ್ವ ಪ್ರದರ್ಶನಕ್ಕೋಸ್ಕರ ತುದಿ, ತುತ್ತ ತುದಿ ಎನ್ನುತ್ತಾ ಸಾಹಸಕ್ಕೆ ಕೈ ಹಾಕದೆ ಬಿಡಲಿಲ್ಲ. ಈ ರೀತಿಯ ಹುಚ್ಚು ಸಾಹಸಗಳೇ  ಕೆಲವೊಮ್ಮೆ ಸಮಯ ಸರಿ ಇಲ್ಲದಾಗ police station ನಲ್ಲಿ ಕೊನೆಯಾಗೋದು ಅನ್ನೋದು ನಮ್ಮ ಹುಡುಗರಿಗೆ ಯಾವಾಗ ತಿಳಿಯುತ್ತೋ ಕಾಣೆ! ಇಲ್ಲಿ ಊಟದ ಜೊತೆ ರಮ್ಯಾ ಕಳಿಸಿದ್ದ ಉತ್ತರ ಕರ್ನಾಟಕ ಅಂಗಡಿಯ ಹುಣಸೇ ತೊಕ್ಕು super hit ಆಯ್ತು! ತಿಮ್ಮಪ್ಪನಿಗೆ ನಮ್ಮನ್ನು ಬೆಟ್ಟದ ತುದಿ ತಲುಪಿಸಿ ಇಳಿದು ಊರಿಗೆ ಹೋಗುವ ಧಾವಂತದಲ್ಲಿ ಎಲ್ಲರಿಗೂ ಗಡಿಬಿಡಿ ಮಾಡುತ್ತಾ ಇದ್ದ. ಕೇಳೋವರೆಗೂ ಕೇಳಿ, ಯಾವಗಲೂ ಶಾಂತತೆಯ ಮೂರ್ತಿಯಂತಿರುವ ನಮ್ಮ ದೈವಿಕ್ ಗೇ ರೇಗಿ ಹೋಗಿ ಒಂದು ಸರೀಗೆ ಆವಾಜ್ ಬಿಟ್ಟ ನಂತರ ತಿಮ್ಮಪ್ಪ ಸ್ವಲ್ಪ ತಾಳ್ಮೆ ತಗೊಂಡಂತೆ ಕಂಡ.


ಇಲ್ಲಿಂದ ಶುರು ಆಯ್ತು ನೋಡಿ ನಿಜವಾದ ಚಾರಣ. ಸರಿಯಾಗಿ ಹೊಟ್ಟೆ ಹಸಿದಿದ್ದರಿಂದ ಸ್ವಲ್ಪ ಹೆಚ್ಚಾಗೇ ತಿಂದು ಹೊಟ್ಟೆ ಮುಂದೆ ಬಂದು, ಅದೂ ಕೂಡ ಹೊರಲಾಗದ ಒಂದು ಲಗೇಜ್ ಆಗಿತ್ತು. ಒಂದೊಂದು ಹೆಜ್ಜೆಗೂ ಏದುಸಿರು ಬಂದು, ವಿರಾಮಗಳೂ ಹೆಚ್ಚಾಗುತ್ತಲೇ ಹೋಯಿತು. ಈ ರೀತಿ ಬಸವನ ಹುಳು ಸ್ಪೀಡ್ ನಲ್ಲಿ ಹೋಗುತ್ತಿದ್ದವರ ಪೈಕಿ, ನಾನು, ಕುಮಾರಣ್ಣ ಹಾಗೂ ಧಡಿಯ. ನಮಗೆ ಬೇಜಾರಾಗದೇ ಇರಲಿ ಅಂತಾ ಉಮೇಶನೂ ಜೊತೆಗೇ ಹೆಜ್ಜೆ ಹಾಕುತ್ತಿದ್ದ. ಇಲ್ಲಿ ಮನಸ್ಸಿನಲ್ಲಿ ಉಳಿದ ಘಟನೆ ಎಂದರೆ ನಮ್ಮ ಸೇಠು ರೆಡ್ ಬುಲ್ ಕುಡಿದು, ಕೆಂಪು ಗೂಳಿ ಥರಾ ಒಮ್ಮೆ ಕೂಗುತ್ತಾ ಜೋರಾಗಿ ಓಡಿದ್ದು! ನಮಗೆ ಅವನ ಅವಸ್ಠೆ ನೋಡಿ ನಗೋಕು ಶಕ್ತಿ ಇಲ್ಲದೇ ಇರೋ ಅಷ್ಟು ಸುಸ್ತಾಗಿತ್ತು. ಮಧ್ಯ ಮಧ್ಯ ಈ ತಿಮ್ಮಪ್ಪನ ಬಡಬಡಿಕೆ ಬೇರೆ ಸಿಕ್ಕಾಪಟ್ಟೆ irritate ಆಗ್ತಾ ಇತ್ತು. ಹಾಗೂ ಹೀಗೂ ಮಾಡಿ, ದಟ್ಟ ಕಾಡಿನ ಏರು ದಾರಿಯನ್ನು ಸಂಪೂರ್ಣವಾಗಿ ಕ್ರಮಿಸಿ ಬಯಲಿಗೆ ಬಂದಾಗ ಹಾಯ್ ಎನಿಸಿತ್ತು. ಅಲ್ಲಿಂದ ಕುಂದಾದ್ರಿ ಪರ್ವತ ಹಾಗು ಸುತ್ತಲ ಸಾಲು ಬೆಟ್ಟಗಳು ಕಣ್ಣಿಗೆ ಮುದ ನೀಡುತ್ತ ಇದ್ದವು. ದಾರಿಗೆ ಅಂತಾ ತಂದಿದ್ದ appy, kit kat, ಕಿತ್ತಳೆ ಹಣ್ಣುಗಳು catalyst ಥರಾ ಕೆಲಸ ಮಾಡಿದವು. ಈ ತಿಮ್ಮಪ್ಪನ torture ತಡೆಯೋಕೆ ಆಗದೆ, ಮುಂದೆ ಹೋಗಿದ್ದ ದೈವಿಕ್ ಗೆ, ತಿಮ್ಮಪ್ಪನ ಹತ್ತಿರ ಮುಂದಿನ ದಾರಿ ಬಗ್ಗೆ ಕೇಳಿ, ಅವನ ದುಡ್ಡು ಸೆಟಲ್ ಮಾಡಿ ಕಳಿಸಿ ಅಂತಾ ಫೋನಾಯಿಸಿದೆ. BSNL spare phone ಚೆನ್ನಾಗೇ ಕೆಲಸಕ್ಕೆ ಬಂದಿತ್ತು. ಇಲ್ಲಿಂದ ನರಸಿಂಹ ಪರ್ವತದ ತುದಿವರೆಗೂ ಅಂಥಾ ಆಯಾಸವಿಲ್ಲದೆ ತಲುಪಿ ಸೂರ್ಯಾಸ್ತ ನೋಡೋ ಜಾಗ ತಲುಪಿದಾಗ ೫:೩೦ ಆಗಿತ್ತು. ಅಲ್ಲೇ ಸ್ವಲ್ಪ ಹೊತ್ತು ವಿರಮಿಸಿ ಚಕ್ಕುಲಿ, ಕೋಡುಬಳೆ ವಗೈರೆಗಳನ್ನು ಸ್ವಾಹಾ ಮಾಡಿ, ಮೋಡದ ಕಾರಣ ಸೂರ್ಯಾಸ್ತಮಾನ ಕಾಣೋದಿಲ್ಲ ಅನ್ನೋದು ಖಾತ್ರಿ ಆದಮೇಲೆ ಜಾಗ ಖಾಲಿ ಮಾಡಿದೆವು.



ಇಲ್ಲಿಂದ ಕೆಳಗೆ ಸ್ವಲ್ಪ ದೂರ ಇಳಿದರೆ, ನಮ್ಮ ಕ್ಯಾಂಪಿಂಗ್ ಜಾಗ. ANF ನವರು ಒಂದು ಸಣ್ಣ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಕಟ್ಟಿದ್ದಾರೆ. ಹೋದ ತಕ್ಷಣ ಒಣ ಕಟ್ಟಿಗೆ ಹಾಗೂ ವ್ಯವಸ್ಥೆಗಳ ಬಗ್ಗೆ ಗಮನ ಕೊಟ್ಟೆವು. ನಮಗಿಂತ ಮುಂಚೆ ಬಂದು ಹೋಗಿದ್ದ ಹರಾಮ್ ಕೋರ್ ಜನ, ಟ್ರೆಕ್ಕಿಂಗ್ ಅಂತಾ ಬಂದು ಇಡೀ ಜಾಗವನ್ನೇ ಗಲೀಜು ಮಾಡಿ ಹೋಗಿದ್ದರು. ಸರಿ next mission is evening Dinner! ನರೇಂದ್ರ ಬಾಬು ನ Assistant Cook ಅಂತಾ ಮಾಡಿಕೊಂಡು, ಅನ್ನ ಸಾಂಬಾರ್ ಮಾಡೋ ಕೆಲಸಕ್ಕೆ ಕೈ ಹಾಕಿದೆ. ತರಕಾರಿ ಅಂತಾ, ಈರುಳ್ಳಿ ಮಾತ್ರ ಸಿಕ್ತು. ಯಾರದೋ ಬ್ಯಾಗ್ ನಲ್ಲಿ ಬಚ್ಚಿಟ್ಟುಕೊಂಡಿದ್ದ ಆಲೂಗೆಡ್ಡೆ ಹಾಗೇ ಬಚ್ಚಿಟ್ಟುಕೊಂಡೇ ವಾಪಸ್ ಮನೆಗೆ ಹೋಯಿತೋ ಏನೋ, ನಮಗಂತೂ ಸಿಗಲೇ ಇಲ್ಲ. ಇದ್ದ raw materials ನಲ್ಲೇ ಹಾಗೂ ಹೀಗೂ, ಉರಿ ಒಲೆಯ ಹೊಗೆ ಕುಡಿಯುತ್ತಾ ಅನ್ನ ಸಾಂಬಾರ್ ರೆಡಿ ಆಯಿತು. ಸುದೀಪ ಮತ್ತು ಸೇಠು ಕೂಡ ಒಲೆ ಉರಿಸುವುದರಲ್ಲಿ ತಮ್ಮ ಅಳಿಲು ಸೇವೆ ಮಾಡಿದರು. ಇದ್ದ ಸ್ವಲ್ಪವೇ ಬೇಳೆ, ಇಲ್ಲದ ಆಲೂಗೆಡ್ಡೆ, ಕತ್ತಲಲ್ಲಿ ಜಾಸ್ತಿ ಆದ ನೀರು ಎಲ್ಲಾ ಸೇರಿ, ಆ ಕಡೆ ತಿಳೀ ಸಾರೂ ಅಲ್ಲದ, ಈ ಕಡೆ ಸಾಂಬಾರ್ ಕೂಡ ಅಲ್ಲದ ಖಾರ ಮುಂದಾದ ಎಡಬಿಡಂಗಿ ಸಾಂಬಾರ್ ಆಗಿತ್ತು ಅದು :). Sale ಆಗೋದಂತೂ ಗ್ಯಾರಂಟಿ ಇದ್ದದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.


ಕೆಲ ಹೊತ್ತಿನ campfire, DC ಆಟಗಳ ನಂತರ ಊಟ. ತಂದಿದ್ದ ೩೦ ಚಪಾತಿ, ಅನ್ನ ಸಾಂಬಾರ್ ಎಲ್ಲವೂ ಕೆಲವೇ ನಿಮಿಷಗಳಲ್ಲಿ ಕಣ್ಮರೆಯಾಗಿ ಎಲ್ಲರ ಹೊಟ್ಟೆ ಸೇರಿದವು. ಊಟ ಆದ ಕೆಲವೇ ನಿಮಿಷಗಳಲ್ಲಿ ಒಬ್ಬೊಬ್ಬರಾಗಿ ಎಲ್ಲರೂ ಅಡ್ಡಾಗಿ ನಿದ್ರಾದೇವಿಗೆ ಶರಣಾದರು. ನಾನು ಹಾಗೂ ದೈವಿಕ್ ಟೆಂಟ್ ನಲ್ಲಿ ಮಲಗಿದೆವು. ಎಡಗಾಲು ತೊಡೆ ಸರಿಯಾಗೇ ಹಿಂಸೆ ಕೊಡ್ತಾ ಇತ್ತು ನಂಗೆ. ಸುಸ್ತಾಗಿದ್ದದ್ದರಿಂದ ನಿದ್ದೆ ಬಂದದ್ದು ಗೊತ್ತಾಗಲಿಲ್ಲ. ಬೆಳಗಿನ ಜಾವ ಚಳಿ ಜೋರಾಗೇ ಇತ್ತು. ಧಡಿಯ ಬಂದು ಶರತಾ ಏಳೋ ಸನ್ ರೈಸ್ ನೋಡಕ್ ಹೋಗಣ ಅಂದೆ, ಬರಲ್ವಾ ಅಂದಾಗ, ಎದ್ದು ಹೊರಟೆ. ನಮ್ಮ ದೈವಿಕ್ ಭಾಯ್ ಅಂದುಕೊಂಡ ಹಾಗೇ ನಿದ್ದೆಲೇ ಸನ್ ರೈಸ್ ನೋಡೋಕೆ ಟ್ರೈ ಮಾಡ್ತಾ ಮಲಗೇ ಇದ್ದರು.

ನಾನು, ಧಡಿಯ, ಡಾಕ್ಟರ್ ನಿಜಗುಣ, ಮಂಜು, ದಯಾ, ಕುಮಾರಣ್ಣ ಅಲ್ಲೇ ಪಕ್ಕದ ಸಣ್ಣ ಗುಡ್ಡ ಹತ್ತಿ ಸೂರ್ಯ ಮೇಲೆ ಬರೋದನ್ನೇ ಕಾಯುತ್ತಾ ಕೂತ್ವಿ. ಕೆಳಗೆ ಬಿಳೀ ಹತ್ತಿಯ ಹಾಸಿನ ನಡುವೆ ಅಲ್ಲಲ್ಲಿ ಗುಡ್ಡಗಳ ತಲೆಗಳು ಇಣುಕಿ ನೋಡುತ್ತಾ ಇರುವಂತೆ ಕಾಣ್ತಾ ಇದ್ದ ರಮಣೀಯ ದೃಶ್ಯವಂತೂ, ಎಷ್ಟೇ ವರ್ಣಿಸಿದರೂ ಕಡಿಮೆ. ಕಣ್ಣ ತುಂಬಾ ಅದನ್ನೇ ತುಂಬಿಕೊಂಡು ಬೆಳಗಿನ ಕಾರ್ಯಗಳನ್ನೆಲ್ಲಾ ಅಲ್ಲೇ ಬಯಲಿನಲ್ಲಿ ಮುಗಿಸಿ ಕೆಲ ಹೊತ್ತು ಹಾಗೇ ಅಡ್ಡಾದೆ. ನಮ್ಮ ಧಡಿಯನ ಅಧ್ಯಕ್ಷತೆಯಲ್ಲಿ ಎಲ್ಲರಿಗೂ Dip Dip ಚಹಾ ಸಮಾರಾಧನೆ ಆಯಿತು. ನಾನು ಹಾಗೂ ಡಾಕ್ಟರ್ ಮಂಜುನಾಥ್ ಸೇರಿ ಉಪ್ಪಿಟ್ಟು ತಾಯಾರು ಮಾಡಿದೆವು. ಈ ಬಾರಿ ಮನೆಯ ಹೊರಗೆ ಒಲೆ ಹಾಕಿದ್ದರಿಂದ ಅಷ್ಟೊಂದು ಕಷ್ಟ ಆಗಲಿಲ್ಲ. ಅಮ್ಮ ಮಾಡಿ ಕೊಟ್ಟಿದ್ದ ಉಪ್ಪಿಟ್ಟು ಮಿಕ್ಸ್ ನಿಂದ ಉಪ್ಪಿಟ್ಟು ಮಾಡೋದು ಕರಗತವಾಗಿತ್ತು ನನಗೆ. ಆದರೂ Large scale ನಲ್ಲಿ ಮಾಡೋವಾಗ ನೀರಿನ ಹೆಚ್ಚು ಕಮ್ಮಿ ಎಲ್ಲಾಗುತ್ತೋ ಅನ್ನೋ ದುಗುಡದಲ್ಲೇ ಕೈ ಹಾಕಿದ್ದೆ. ಕೊನೇಗೆ Perfect Mixed Concrete ಆಗಿ ರೂಪುಗೊಂಡಾಗ ಒಂದು ರೀತಿ ಸಮಾಧಾನವಾಯಿತು. ಉಪ್ಪಿಟ್ಟಿನ ಪರಮ ಭಕ್ತರಾದ ಶ್ರೀಮಾನ್ ನಿಜಗುಣ ಡಾಕ್ಟ್ರು ಧನ್ಯೋಸ್ಮೆ ಎಂದು ಚಪ್ಪರಿಸಿಕೊಂಡು ಬಾರಿಸಿದರು. ಎಲ್ಲಾ ಕ್ರೆಡಿಟ್ ಅಮ್ಮನಿಗೆ! ಒಂದು ಸಣ್ಣ ರವೆಯ ಕಾಳೂ ಬಿಡದ ಹಾಗೆ ಪಾತ್ರೆ ಖಾಲಿಯಾಯಿತು.

 ನಂತರ ಮತ್ತೆ ನಿದ್ದೆ. ಆಮೇಲೆ ಸುತ್ತ ಮುತ್ತಲಿನ ಆವರಣ ಪ್ಲ್ಯಾಸ್ಟಿಕ್ ಮುಕ್ತಗೊಳಿಸುವ ಕಾರ್ಯಕ್ರಮ ಮುಗಿಸಿ, ಫೈನಲ್ ಪ್ಯಾಕಿಂಗ್ ಮುಗಿಸಿ ಹೊರಡೋಕೆ ರೆಡಿ. ಎಂದಿನಂತೆ ಒಂದು ಗ್ರೂಪ್ ಫೋಟೋಗೆ ಪೋಸ್ ಕೊಟ್ಟು ಹೊರಟಾಗ ಸರಿಯಾಗಿ ೧೨ ಘಂಟೆ ಆಗಿತ್ತು. ಉಳಿದಿದ್ದ ೬ ಕಿ.ಮೀ ಕ್ರಮಿಸಲು ತೆಗೆದುಕೊಂಡ ಸಮಯ ೩:೩೦ ಘಂಟೆ! ಎಲ್ಲಾ ಕಡೆ ಕುಳಿತು, ಇದ್ದ ಬದ್ದ ಹಾಳು ಮೂಳನ್ನೆಲ್ಲ ತಿಂದು ತೇಗಿ, ಹರಟುತ್ತಾ ನಿಧಾನವಾಗಿ ಕಿಗ್ಗದ ಋಷ್ಯಶೃಂಗ ದೇವಾಲಯದ ಮುಂದೆ ಕೊನೇಗೂ ಬಂದು ತಲುಪಿದ್ವಿ. ಇಲ್ಲಿ ಶುರು ಆಯಿತು ಎಲ್ಲರ ಗಡಿಬಿಡಿ, confusions. ಮೈಸೂರಿನ ಇಬ್ಬರು ಸೀದಾ ಹೊರಡೋದು ಅಂತಾ ರೆಡಿ ಆದರು. ಬೆಂಗಳೂರು ಹಾಗು ಬಿಡದಿ ಕಾರುಗಳವರು ಕೆಲವರು ಸಿರಿಮನೆ ಫಾಲ್ಸ್ ನೋಡಿ ಹೋಗೋದು, ಹಾಗೂ ಕೆಲವರು ಸೀದಾ ಹೋಗಿ ಕಾರ್ ನ ಮಲ್ಲಂದೂರಿನಿಂದ ತಂದು ಆಗುಂಬೆಯಲ್ಲಿ ಕಾಯೋದು ಅಂತಾ ಪ್ಲಾನ್ ಮಾಡ್ತಾ ಇದ್ದರು. ನಾನು ಹಾಗೂ ಧಡಿಯ ಏನೂ ಯೋಚನೆಯಿಲ್ಲದೆ ಅಲ್ಲೇ ಅಂಗಡಿಯಲ್ಲಿ ಚಕ್ಕುಲಿ, ಚಾಕಲೇಟ್, ಬಾಳೆಹಣ್ಣುಗಳ ಕಡೆ ಗಮನ ಕೊಟ್ಟಿದ್ವಿ. ಕೊನೇಗೆ ಅದೇನಾಯ್ತೋ ಏನೋ ಎಲ್ಲರೂ ಸೀದಾ ಆಗುಂಬೆಗೆ ಎರಡು ಆಟೋಗಳಲ್ಲಿ ಹೊರಟೇಬಿಟ್ಟರು. ನಾನು ಧಡಿಯ ಇನ್ನೊಂದು ಆಟೋ ಹತ್ತಿ ಸಿರಿಮನೆ ಫಾಲ್ಸ್ ಗೆ ಹೋಗಿ ನೀರಿಗೆ ಮೈಯೊಡ್ಡಿದೆವು. ಆ ನೀರಿನ ತಂಪು ಹಾಗೂ ಮೇಲಿಂದ ಬೀಳುತ್ತಿದ್ದ ರಭಸಕ್ಕೆ, ಮೈಯೆಲ್ಲಾ ಹಗುರವಾಗಿ ಹಾಯ್ ಎನಿಸಿತು.



ಕಿಗ್ಗದಿಂದ ಶೃಂಗೇರಿಗೆ ಸಹಕಾರ ಸಾರಿಗೆ ಬಸ್ ನಲ್ಲಿ ಬಂದು, ಲಗೇಜ್ ನ ಅಲ್ಲೇ ಇಟ್ಟು, ಕಾಫಿ ಹಾಗೂ ಮಂಗಳೂರು ಬಜ್ಜಿ ಕಬಳಿಸಿ, ತುಂಗಾ ನದಿಯ ಮೀನುಗಳಿಗೆ ಪುರಿ ತಿನ್ನಿಸಿ, ತಾಯಿ ಶಾರದೆಗೆ ನಮಿಸಿ, ಊಟ ಅಲ್ಲೇ ಮುಗಿಸಿದಾಗ ೮ ಘಂಟೆಯಾಗಿತ್ತು. ಇಷ್ಟೊತ್ತಿಗಾಗಲೇ, ನಮ್ಮಿಬ್ಬರಿಗೂ ಪ್ರತಿ ಒಂದು ಹೆಜ್ಜೆಯೂ ದೊಡ್ಡ ಬೆಟ್ಟ ಹತ್ತಿದ ಹಾಗೆ ಭಾಸವಾಗುತ್ತಾ ಇತ್ತು. ಕೊನೇಗೂ ಬಸ್ ಸ್ತ್ಯಾಂಡ್ ಗೆ ಬಂದು ಬಸ್ ನ ಕಂಡಾಗ ಒಂದು ರೀತಿ ನೆಮ್ಮದಿ ಆಯ್ತು. ಸ್ವಚ್ಛವಾಗಿದ್ದ ಹೊಸಾ ಬಸ್ ಹಾಗೂ ಕಾಲು ಚಾಚಿ ಮಲಗೋಕೆ ಅವಕಾಶ ಇದ್ದ ಸ್ಲೀಪರ್ ಬೆಡ್ ಗಳು ಸ್ವರ್ಗಕ್ಕೇ ಮೂರೇ ಗೇಣು ಅನ್ನೋ ಹಾಗೆ ಭಾವಿಸಿದವು. ಮಲಗಿ ಈ ಕಾರ್ ಗಳು ಎಲ್ಲಿವೆ ಅಂತಾ ಫೋನ್ ಮಾಡಿ ಕೇಳಿದಾಗ ಇನ್ನೂ ಶಿವಮೊಗ್ಗ ! ಯಾಕೆ ಬೇಕಿತ್ತಪ್ಪಾ ಇವರಿಗೆ ಈ ಕಾರ್ ನ ಹುಚ್ಚು ಮೋಹ ಅಂತಾ ಅನಿಸಿದ್ದು ಸಹಜವಾಗೇ ಇತ್ತು.




ಬೆಳಗ್ಗೆ ೫:೩೦ಕ್ಕೆ ಯಾರ್ರೀ ಅದು ಮೆಜೆಸ್ಟಿಕ್ ಅಂತಾ ಕಂಡಕ್ಟರಣ್ಣ ಬಡಬಡಿಸಿದಾಗಲೇ ಎಚ್ಚರ! ಅಂಥಾ ಸುಖನಿದ್ರೆ! ಧಡಿಯನಿಗೆ ಬಾಯ್ ಹೇಳಿ ಅಲ್ಲೇ ಸಿಟಿಬಸ್ ನಲ್ಲಿ ಬಂದು ೬:೧೫ಕ್ಕೆ ಸೇರಿದೆ... ಮತ್ತದೇ ನನ್ನ ಮುಗ್ಧಲೋಕಕ್ಕೆ :)

ಅನಿಸಿಕೆಗಳು ನಿಮ್ಮ comments ನಲ್ಲಿ.

ನಗು ನಗುತಾ ನಲಿ ನಲಿ...ಏನೇ ಆಗಲಿ :)





ಕೆರೆಯ ನೀರು ಹರಿದಂತೆ...

ಜೀಪಿನ ಹಿಂದಿನ ಸೀಟೇ ಸರಿ ಅಂತಾ "ನೀನು ಮುಂದೆ ಬಾರಮ್ಮ" ಅಂತಾ ಬಿಂದು ಮೇಡಮ್ ಗೆ ಹೇಳಿದ್ದಕ್ಕೆ, ಸೀದಾ ಹೋಗಿ ಡ್ರೈವರ್ ಸೀಟ್ನಲ್ಲಿ ಸ್ಟೇರಿಂಗ್ ಹಿಡ್ಕೊಂಡ್ ಕುಳಿತು ಬಿಡೋದಾ ಪಾರ್ಟಿ...!! ಶಿವಾ.. ನೀನೇ ಕಾಪಾಡಪ್ಪಾ ಅಂತಾ ಸೈಲೆಂಟ್ ಆಗಿ ಬಂದು ದಿಂಬು ಸರಿ ಮಾಡ್ಕೊಂಡು ಹಿಂದಿನ ಸೀಟಿನಲ್ಲಿ ಕಾಲು ಚಾಚಿದೆ. ಅಲ್ಲೇ ಇದ್ದ ದಿಂಬಿನ ಮೇಲೆ ತಲೆಯನ್ನು ಅನಿಸುತ್ತಿದ್ದ ಹಾಗೇ... ಹಾಯ್ ಅನ್ನಿಸ್ತು. "ಗಗನವೇ ಬಾಗಿ...ಭುವಿಯನು..ಸೇರಿದಾ ಹಾಗೆ.. ಕಡಲು ಕರೆದಂತೆ.." ಅಂತಾ ಹಾಡು ಬರ್ತಾ ಇತ್ತು... "ಎಲ್ಲಿದ್ದೀನಿ ಈಗ...? ಸಧ್ಯಕ್ಕೆ ಈ ಜೀಪಿನಲ್ಲಿ ಹೋಗ್ತಾ ಇರೋದು ಎಲ್ಲಿಗೆ?" ಅನ್ನೋ ವಾಸ್ತವದ ಅರಿವು ಆಗ್ತಾ ಇದ್ದ ಹಾಗೆ, ಹಳೆಯ ನೆನಪಿನ ಪುಸ್ತಕದ ಹಾಳೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಯಿತು.. ಹಾಗೇ ಕಣ್ಣು ಮುಚ್ಚಿ ಅವುಗಳನ್ನು ಮನದಲ್ಲೇ ಮೆಲುಕು ಹಾಕುತ್ತಾ ಹೋದೆ..

ಈಗ ಸರಿ ಸುಮಾರು ೨೨ ವರ್ಷಗಳ ಹಿಂದಿನ ಪ್ರಸಂಗ. ಬಿಡದಿ ಹಾಗು ಅಲ್ಲಿಯ ನನ್ನ ಪ್ರೈಮರಿ ಸ್ಕೂಲಿನ ದಿನಗಳು. ಅಲ್ಲಿನ ಪುಡಿ ರಾಜಕಾರಣಿಗಳು, ಕೆಲಸ ಇಲ್ಲದೇ ಇರೋರು, ಬಿಸಿನೆಸ್ ಮಾಡೋ ಅಂಗಡಿ ಓನರ್ ಗಳು ಎಲ್ಲಾ ಸೇರಿ ಒಂದು ಕಡೆ ಗಣೇಶನ್ನ ಇಡ್ತಾ ಇದ್ರು. ಇಡೀ ಊರಿಗೆ ಒಂದೇ ಗಣೇಶ ಆಗ. ಸಣ್ಣ ಊರು, ಯಾರೇ ಎದುರಿಗೆ ಸಿಕ್ಕಿದರೂ, ಇವರು ಇಂಥಾವರು ಅಂತಾ ಹೇಳಬಹುದಾಗಿತ್ತು. ಹೊಸಬರು ಕಂಡರೂನು, ಇಂಥಾವರ ಮನೇಗೆ ಬಂದಿರೊವರು ಅಂತಾ ಪಕ್ಕಾ ಖಬರ್ ಎಲ್ಲರಿಗೂ ಇರೋದು. ಅಂಥಾ ಒಂದು ಶನಿವಾರ, ಊರ ಗಣೇಶನ್ನ ಬಿಡೋ ಸಂದರ್ಭ. ಭಾರೀ ಮೆರವಣಿಗೆ...ಊರು ತುಂಬಾ ಸಡಗರ.

"ಬಸವಣ್ಣನ ಗುಡಿ ಕಡೆ ಇಂದಾ.. ಅಂಗಡಿ ಬೀದಿ ಆಸಿ... ಕೆಳ್ಗಡೆಗಂಟಾ ಓಗಿ, ಇಂದಿರಾನಗರದಲ್ಲಿ ಎಲ್ಲಾ ಬೀದಿಗು ಓಗಲ್ಲವಂತೆ.. ಅಂಗೇ ತಿಮ್ಮಪ್ಪನ ಕೆರೆ ಬಗುಲನಾಗೆ ಬಂದು...ಇಂದ್ಲು ಬೀದಿ ಕಡೆ ಆಸಿ ಈ ಕಡೆ ಬತ್ತಾದಂತೆ. ಆಮೇಲೆ ಸಿಲ್ಕ್ ಫ಼ಾರಂ ಬಳುಸ್ಕೊಂಡು.. "ಕೆರೆ" ಗಂಟಾ ಓಗಿ.. ಬಿಡೋದು...".. ಹಾಲು ಹಾಕೋ ಬೋರಮ್ಮ ಪೂರ್ತಿ ಮೆರವಣಿಗೆ schedule ನ ಬೆಳಗ್ಗೇನೆ ಅಮ್ಮನ ಹತ್ತಿರ ಒಪ್ಪಿಸ್ತಾ ಇದ್ಲು.

ಕೆರೆ!! ನೆಲ್ಲಿಗುಡ್ಡೆ ಕೆರೆ!! ಕಿವಿ ಚುರುಕಾಗಿ ನಿಂತುಕೊಂಡವು. ನೆಲ್ಲಿಗುಡ್ಡೆ ಕೆರೆ. ಇದರ ಬಗ್ಗೆ ಸ್ವಲ್ಪ ಹೇಳಿಬಿಡುತ್ತೀನಿ. ಬಿಡದಿಯಿಂದ ಮಾಗಡಿ ಕಡೆಗೆ ಒಂದು ಸಣ್ಣ ರಸ್ತೆ ಹೋಗುತ್ತೆ. ದಾರಿಯಲ್ಲಿ ಮಂಚನಬೆಲೆ, ಸಾವನದುರ್ಗ ಇವೆಲ್ಲಾ ಸಿಗುತ್ತವೆ. ೧.೬ ಕಿಲೋಮೀಟರ್ ಕ್ರಮಿಸಿದರೆ, ನಿಮ್ಮ ಕಣ್ಣ ಎದುರಿಗೇನೆ ನೆಲ್ಲಿಗುಡ್ಡೆ. ವಿಶಾಲವಾಗಿ ಚಾಚಿಕೊಂಡಿರೋ ಕೆರೆ. ಸುತ್ತ ಮುತ್ತ ಹಳ್ಳಿಗಳಿಗೆ ಕೃಷಿ ಹಾಗೂ ನೀರಾವರಿಯ ಮೂಲ. ಒಂದು ಮಾನವ ಚಾಲಿತ ಬಾಗಿಲು ಇರೋ ಕಾಲುವೆ (channel) ಇದೆ. ಇದರಲ್ಲಿ ಬಿಡೋ ನೀರನ್ನ ಸುತ್ತ ಮುತ್ತಲಿನ ರೈತರು ಕೃಷಿ ಭೂಮಿಗಳಲ್ಲಿ ಬಳಸಿಕೊಳ್ತಾರೆ. ನೀರು ಬತ್ತೋದಕ್ಕೆ ಆಸ್ಪದನೇ ಇಲ್ಲ. ಅಷ್ಟು ದೊಡ್ಡ ಸಮೃದ್ಧ ಕೆರೆ. ಇದರ ನಡುವಲ್ಲಿ ತೆಂಗಿನ ಮರಗಳೆಲ್ಲಾ ಮುಳುಗಿವೆ. ಅವುಗಳ ಬೋಳು ತಲೆಗಳನ್ನು ಬೇಸಿಗೆ ಸಮಯ ನೀರು ಕಮ್ಮಿ ಆದಾಗ ನೋಡಬಹುದು. ಮಳೆಗಾಲದಲ್ಲಿ ಕೋಡಿ ಹೊಡೆಯೋದು ಸಾಮಾನ್ಯ. ೪ ಅಥವ ೫ ವರ್ಷ ಕೋಡಿ ಆಗದೆ ಇದ್ದಿದ್ದನ್ನೂ ನೋಡಿದ್ದೇನೆ. ಕೋಡಿ ಆದರೆ, ಸುತ್ತ ಮುತ್ತಲಿನ ರೈತರು ಈ ಬಾರಿ ಒಳ್ಳೇ ಮಳೆ ಅಂತಾ ಖುಷಿ ಪಡುತ್ತಾರೆ. ಆಗಿನ ಕಾಲದ SSLC Results ದಿನಗಳಲ್ಲಿ ಇಲ್ಲಿ ಪೊಲೀಸರ ಗಸ್ತು ಸಾಮಾನ್ಯ ದೃಶ್ಯ ಆಗಿರುತ್ತಾ ಇತ್ತು. ಯುವ ಜನರಿಗೆ ಪರೀಕ್ಷೆಯಲ್ಲಿ ಫ಼ೇಲ್ ಆದಾಗ, ಮನೇಲಿ ಬೈದಾಗ, ಪ್ರೇಮಿಗಳಿಗೆ ತಲೆ ಕೆಟ್ಟಾಗ ಆರಾಮಾಗಿ ಬಂದು ಮನಸೋ ಇಚ್ಛೆ ನೀರಲ್ಲಿ ಬಿದ್ದು ಸಾಯೋಕೆ ಹೇಳಿ ಮಾಡಿಸಿದ ಜಾಗ. ಯಾರಾದರೂ ಬಿಡದೀಲಿ, ಮನೆ ಬಿಟ್ಟು ಹೋದರು ಅಂದರೆ, ಈಗಲೂ ಕೆರೆ ಹತ್ತಿರಾನೆ ಮೊದಲು ಹೋಗಿ ಹುಡುಕೋದು.

ವರ್ಷದ ಯಾವುದೋ ಒಂದು ಕಾಲದಲ್ಲಿ ವಿದೇಶದ ವಲಸೆ ಹಕ್ಕಿಗಳೂ ಬಂದು ಕಾಣಿಸುತ್ತವೆ ಅಂತಾ ಓದಿದ್ದೆ. ಸ್ವತಃ Bird watching expert ಆದರೂನೂ, ಇಲ್ಲಿಯವರೆಗೂ ಇದನ್ನ ಗಮನಿಸಕ್ಕೆ ಆಗಿಲ್ಲ ;-). ಕೆರೆ ಪಕ್ಕದಲ್ಲೇ ಮೀನು ಸಾಕಣೆ ಕೇಂದ್ರ ಅಂತಾ ರಾಜ್ಯ ಸರ್ಕಾರ ತೊಟ್ಟಿಗಳನ್ನು ಮಾಡಿವೆ. ಹೊಸ ವರ್ಷದ ದಿನ ಆಗಿನ ಕಾಲಕ್ಕೆ, ಪಡ್ಡೆ ಹುಡುಗರಿಗೆ ಎಣ್ಣೆ ಹೊಡೆಯೋಕೆ ಅತ್ಯಂತ ಪ್ರಶಸ್ತವಾದ ಸ್ಥಳ.

ನನಗೆ personal ಆಗಿ ನೆಲ್ಲಿಗುಡ್ಡೆ ಕೆರೆಯ ವಾತಾವರಣ ಅಲ್ಲಿನ ನೀರವತೆ, ಸೂರ್ಯಾಸ್ತದ ಸಮಯ ದೂರದಲ್ಲಿ ಕಾಣೋ ಸಾವನದುರ್ಗದ ವಿಹಂಗಮ ನೋಟ ಇವೆಲ್ಲಾ ಇಷ್ಟ. ನಮ್ಮ ಮನೆಗೆ ಯಾರೇ ಅತಿಥಿಗಳು ಬಂದರೂ, ಇಲ್ಲಿಗೆ ಒಂದು walk ಇದ್ದೇ ಇರ್ತಾ ಇತ್ತು. ಕಾರ್ ತಗೊಂಡರೆ ಇದರ backdrop nalle ನೇ ಅದರ ಫೋಟೋ ತೆಗೀಬೇಕು ಅಂತಾ ಒಂದು ಮಹದಾಸೆ ಬೇರೆ!! ಬಿಡದಿ ಬಿಟ್ಟ ನಂತರ ಈಗಲೂ ಆ ಕಡೆ ಹೋದಾಗೆಲ್ಲಾ ಕೆರೆಗೆ ಒಂದು ಭೇಟಿ ಗ್ಯಾರಂಟಿ. ಕೆರೆ ಪ್ರವರ ಇಷ್ಟು ಸಾಕು ಅನ್ನಿಸುತ್ತೆ!

ಸರಿ. ವಿಷಯಕ್ಕೆ ಬರೋಣ. ಈ ಸಲ ಅದೇನಾದ್ರು ಆಗಲಿ ಕೆರೆವರೆಗೂ ಹೋಗಿ ಗಣೇಶನ್ನ ಬಿಡೋ ಪೂರ್ತಿ ಕಾರ್ಯಕ್ರಮ ನೋಡ್ಕೊಂಡೇ ಬರಬೇಕು ಅಂತಾ.. ಆಚೆ ಗೋಲಿ ಆಡ್ಕೊಂಡ್ ಬರೋ ನೆಪದಲ್ಲಿ ಹೋಗಿ ನಂದೀಶನ್ನ ತಯಾರಾಗಿಸಿ ಬಂದಿದ್ದು ಆಗಿತ್ತು. According to Boramma's exact schedule, ಹೊಂಬಯ್ಯನವರ tractor ಮೇಲೆ ಕೂತ್ಕೊಂಡು ಗಣೇಶ ನಮ್ಮನೆ ಮುಂದೇನೂ ಬಂದೇ ಬಿಟ್ಟ. ಆ ಸಲ ದೇವರ ಹೊಸಳ್ಳಿಯಿಂದ ನಂದಿ ಕೋಲು ಹಾಗೂ ದೇವರು ಕುಣಿಸೋರನ್ನ ಕರೆಸಿದ್ದು ವಿಶೇಷ ಆಗಿತ್ತು. ಅಮ್ಮ ಗಣಪತಿಗೆ ಕಾಯಿ ಒಡೆಸಿ, ಪೂಜೆ ಮಾಡಿಸಿದಳು. "ಇಲ್ಲೇ ನಂದೀಶನ ಮನೆವರೆಗೂ ಮೆರವಣಿಗೆ ಜೊತೇನೆ ಹೋಗಿ, ಆಮೇಲೆ ಸ್ಕೂಲ್ ಹತ್ರ ಆಟ ಆಡ್ಕೊಂಡ್ ಬರ್ತೀನಮ್ಮ" ಅಂತಾ ಹೇಳಿ, escape ಆಗಿದ್ದೆ.

ಶ್ರೀ ಶ್ರೀ ವಿದ್ಯಾ ಗಣಪತೀಕ್ಕಿ...ಜೈ... ಡಂಕಣಕನ್... ಡಂಕಣಕನ್... ತಮಟೆ.. ಢಾಂ ಢೀಂ.. ಈರುಳ್ಳಿ ಬಾಂಬ್! ವಾಹ್! ಏನ್ ವೈಭವ!

ಕೆರೆ ಹತ್ತಿರ ಮೆರವಣಿಗೆ ಅಂತ್ಯವಾಗಿ, ಇದ್ದ ಘಟಾನುಘಟಿಗಳೆಲ್ಲಾ ಸೇರಿ, ಗಣೇಶನ್ನ ಎತ್ತಿಕೊಂಡು, ನಾನು ಆ ಕೆರೇಲಿ ಈಜಲಿಕ್ಕೆ ನನ್ನ ಮಿತಿ ಅಂತಾ ಯಾವ ಜಾಗನಾ ಗುರುತು ಇಟ್ಟುಕೊಂಡಿದ್ದೆನೋ ಅಲ್ಲಿಗಿಂತಾ ತುಸು ಮುಂದೇನೆ ಹೋಗಿ ಮುಳುಗಿಸಿದ್ದನ್ನ ಕಣ್ಣು ತುಂಬಾ ನೋಡಿದ್ದು ಆಯಿತು. ಎಲ್ಲರೂ ಪ್ರಸಾದ ತಗೊಂಡೇ ಹೋಗಬೇಕು ಅಂದಾಗ, ನಮ್ಮ ಕ್ಲಾಸಿನ ದೈತ್ಯ ಗಾತ್ರದ ಗೆಳೆಯ 'ತೇಜ'ನೇ ಎಲ್ಲರಿಗು ಮುತ್ತುಕದ ಎಲೆ ಕೊಡ್ತಾ ಇದ್ದ. ನನ್ನ ಹತ್ತಿರನೂ ಬಂದು..."ಓ! ತಗೋ ಮಗಾ..ಈ ಸಲ ಇಲ್ಲಿವರೆಗೂ ಬಂದಿದೀಯ! ಪರವಾಗಿಲ್ಲ...! ಏಯ್ ಇಲ್ಲಿ ಪೊಂಗಲ್ ಹಾಕೋ" ಅಂತಾ ಕೂಗಿ ಮುಂದೆ ಹೋದ. ಅಲ್ಲೇ ಕಲ್ಲು ಬೆಂಚಿನ ಹತ್ತಿರ ನಂದೀಶನ ಜೊತೆ ಕೂತು, ಸೀ ಪೊಂಗಲ್ ಹಾಗೂ ವಿಪರೀತ ಈರುಳ್ಳಿ ಬೆಳ್ಳುಳ್ಳಿ ಹಾಕಿದ ಚಿತ್ರಾನ್ನ ತಿಂದಿದ್ದೂ ಆಯಿತು.

Next Mission?? ನಂದೀಶನ ಮುಖ ನೋಡಿ ಹಂಗೇ ಕಣ್ಣ ಸನ್ನೆಯಲ್ಲೇ Enter the dragon ಅಂತಾ ನೀರಿಗೆ ಇಳಿದಿದ್ದೇ!! ಆಗ ತಾನೇ ಕೋಡಿ ಇಂದಾ ಹರಿವು ನಿಂತು, ತುಳುಕುತ್ತಾ ಇದ್ದ ನೀರಿನಲ್ಲಿ ಅಲ್ಲೇ ಒಂದೆರಡು ಸುತ್ತು ಈಜು ಹೊಡೆದ್ವಿ. ಈಜು ಬೇಜಾರಾಗಿ ದಡಕ್ಕೆ ಬಂದಮೇಲೆ.. ಹಾಕಿದ್ದ ಟೀ ಶರ್ಟನ್ನೇ, ಸೊಂಟಕ್ಕೆ ಕಟ್ಟಿಕೊಂಡು ಒಳ ಚಡ್ಡಿ ನೆನೆಸಿ, ಹಿಂಡಿ ಕೊಡವಿ...ಎಲ್ಲ ನೀರು ಹೋಯ್ತು ಅಂತಾ ಹಂಗೇ ಮತ್ತೆ ಅದನ್ನೇ ಏರಿಸಿಕೊಂಡಿದ್ದೂ ಆಯಿತು. ನಮ್ಮ ನಂದೀಶನದು ಒಂಥರಾ ಹುಚ್ಚು ಸಾಹಸಗಳೇ ಯಾವಾಗಲೂ. "ಲೇ ಶರತಾ... ಕೋಡಿ ದಾಟಿಕೊಂಡು ಆ ಕಡೆ ಹೋಗ್ ಬರೋಣ ಬಾರೋ" ಅಂತಾ ಅಲ್ಲೇ ನೀರಿನ ಪಕ್ಕಾನೇ ಕಲ್ಲು ಬಂಡೆಗಳ ಮೇಲೆ ಹಾರುತ್ತಾ ಆ ಕಡೆ ಇಬ್ಬರೂ ಹೋಗಿ ನಿಂತಾಗ ಏನೋ ಸಾಧಿಸಿದ್ವಿ ಅನ್ನೋ ಸಾಧನಾಭಾವ! ನಾಳೇ ಸ್ಕೂಲ್ ನಲ್ಲಿ ಗುಂಡ, ಸೇಠು, ಸಂದೀಪಂಗೆ ಹೇಳಕ್ಕೆ ಒಂದು ಸರಕು ಸಿಕ್ಕಿತು ಅನ್ನೋ ಖುಷಿಯಿಂದಾ ತಿರುಗಿ ಈ ಕಡೆ ದಡಕ್ಕೆ ಬಂದ್ವಿ. ಬರೋವಾಗಾ ನಂದೀಶ ಕೂಗಿದ. "ಲೇ ಅಲ್ಲಿ ನೋಡೋ ಲೋಕೇಶನ ಅಣ್ಣ ಗಾಡಿ ಹೊಡೀತಾ ಇದಾನೆ.. ಊರ್ ಕಡೇಗೇನೆ ಅನಿಸುತ್ತೆ.. ನಡೀ ಓಡಣಾ" ಇಬ್ರೂ ಎದ್ದೂ ಬಿದ್ದೂ ಓಡಿ, ಆ ಎತ್ತಿನ ಟೈರ್ ಗಾಡಿನಾ running ನಲ್ಲೇ ಹತ್ತಿ ನಿಂತಾಗ ಆಗಿದ್ದ ಸಂತೋಷ ಹೇಳತೀರದು. ನಡೆಯೋದು ತಪ್ಪಿತು ಅನ್ನೋ ಖುಷಿ ಒಂದು ಕಡೆ, ನಾಳೆ ಸ್ಕೂಲ್ ನಲ್ಲಿ ಹೇಳಕ್ಕೆ ಇನ್ನೊಂದು material ready! ವಾಹ್!

ಯಥಾಪ್ರಕಾರ ದೈವಿಕ್ ಮನೇಲಿ ಶನಿವಾರದ tv ಸಿನೆಮಾ ನೋಡಿ ಮನೆಗೆ ಬಂದು ಮಲಗಿದ್ದೆ (ಮನೇಲಿ tv ತರೋದು ಗಗನ ಕುಸುಮವಾಗಿತ್ತು ಆಗ). ಮುಂಜಾನೆ ಸೈಕಲ್ ಬೆಲ್ ಶಬ್ದ ಕೇಳಿದಾಗ ರಾತ್ರಿ ಕನಸಲ್ಲೇ ಬೆಲ್ ಹೊಡೆದಂತಾಯಿತು. ಆಚೆ ಅಮ್ಮ ಪಾತ್ರೆ ತಗೊಂಡ್ ಹೋದ್ರು. ಶಿವಲಿಂಗಯ್ಯ ಹಾಲು ಹಾಕ್ತಾ "ಏನ್ ಅಮ್ಮಾವ್ರೆ.. ಮಗನ್ನ ಅಲ್ಲಿಗಂಟಾ ಯಾಕೆ ಬುಡ್ತೀರಿ?"

"ಎಲ್ಲಿಗೆ ಶಿವಲಿಂಗಯ್ಯ?"

"ಅಯ್ಯೋ ಏನ್ರವ್ವಾ ನಿಮ್ ಮಗ 'ಸರತ್ತು'ನೂ, ಆರ್.ಜಿ.ಎಸ್ ಮೇಷ್ಟ್ರು ಮಗಾನೂ, ನೆನ್ನೆ ಕೆರೆಗಂಟಾ ಗಣೇಶನ ಮೆರವಣಿಗೆ ಜೊತೆನೇ ಬಂದು, ಅಲ್ಲಿ ಪೂರ್ತಾ ಬಿಡೋಗಂಟಾ ಇದ್ದು, ಈಜು ಗೀಜು ಎಲ್ಲಾ ಒಡ್ಕೊಂಡು...ಏನ್ ಅವತಾರಾ ಅಂತೀರಿ ಇಬ್ರುದೂ! ನಾನು ಕೂಗ್ಕಂಡೆ ಒಂದ್ ಸಲ....ಕೇಳ್ಬೇಕಲ್ಲ ಉಡುಗ್ ಮಕ್ಳುಗೆ! ಕೋಡಿ ಒಡದಿರೋ ಕೆರೆ... ಏನಾರ ಎಚ್ಚು ಕಮ್ಮಿ ಆದ್ರೆ ಏನ್ ಕತೆ ಅಂತಾ! ಉಸಾರಮ್ಮ...ನೋಡ್ಕಳಿ!"

ಇಷ್ಟು ದಿನ ಬರೀ ನೀರು ಮಿಶ್ರಿತ ಹಾಲು ಕೊಡ್ತಾ ಇದ್ದ ಶಿವಲಿಂಗಯ್ಯ, ಬಿಡದೀಲಿ ಇದ್ದ ನನ್ನ ದುಶ್ಮನ್ ಗಳ ಪಟ್ಟಿ ಗೆ ಹೊಸದಾಗಿ entry ಕೊಟ್ಟಿದ್ದ .

"ಕೇಳಿದ್ರಾ ನಿಮ್ ಮಗನ ಪ್ರತಾಪನಾ?!"

"ಏನ್ ಅಂತೇ" ಅಣ್ಣ ಕನ್ನಡಕ ಸರೀ ಮಾಡ್ಕೊತಾ ಕೇಳಿದರು. "ಕೆರೆ!.. ಗಣೇಶ.. ಈಜು...ಒದ್ದೆ ಒಳಚಡ್ಡಿ... ಬೆಳ್ಳುಳ್ಳಿ ಚಿತ್ರಾನ್ನ..." ಎಲ್ಲಾ 'ctrl + v' ಆಯಿತು.

"ಎದ್ದೇಳೋ ಬದ್ಮಾಶ್ ಅಂತಾ ಅಮ್ಮ ಹಲ್ಲು ಕಡಿದು ಗುಡುಗಿ... ಇನ್ನೊಂದ್ ದಿನ ಹೇಳದೇ ಕೇಳದೇ ಕಾಲು ಆಚೆ ಇಡು ಮನೆಯಿಂದಾ...ಕಾಲು ಮುರಿದು ಕೈಗೆ ಕೊಡ್ತೀನಿ rascal!!" ಅಂತಾ ಸರೀಗೆ ಎರಡು ಬಿಟ್ಟಿದ್ದಳು. ಕೆಲ ಹೊತ್ತಿನ ನಂತರ ಕುಡಿಯೋಕೆ ಹಾಲು Bournvita ಹಾಕಿ ಕೊಟ್ಟು ಹೋದಳು. ಇಲ್ಲಿ ನನಗೆ ಲೋಟದಲ್ಲಿದ್ದ ಹಾಲು ನೋಡಿದರೂ, ಅದನ್ನು ಕೊಟ್ಟು ಹೋದ ಶಿವಲಿಂಗಯ್ಯ... ವಜ್ರಮುನಿ ಫ಼ೇಸ್ resemblance ಬಂದು ಅವನ ಮೇಲಿನ ಸಿಟ್ಟು sip by sip ಏರುತ್ತಾ ಜಾಸ್ತಿ ಆಗ್ತಾ ಇತ್ತು!

"Dunkin Donuts ಇಲ್ಲೇ ಇದೆ ಕಣ್ಲಾ. ಒಂದು 60 ಕಾಪಿ ಹಾಕ್ಕೊಂಡು ಪ್ರಯಾಣ ಮುಂದುವರೆಸೋಣವೇ" ಅಂತಾ ಯಾರೋ ಬಡಬಡಿಸಿದಂತಾಯಿತು....

ಮನೇ ಇಂದಾ ಕಾಲು ಆಚೆ?...ಕೆರೆ ? ಜೈ ಅಂತಾ ಎದ್ದು ಕೂತು ವಾಸ್ತವಕ್ಕೆ ಬಂದೆ.

ಅಮ್ಮ ನೋಡದೇ ಇರೋ ಸಮುದ್ರಗಳನ್ನೇ ದಾಟಿ, ಯಾವುದೋ ದೂರ ದೇಶದಲ್ಲಿ ಹರೀತಾ ಇರೋ ನಯಾಗರ ಜಲಪಾತಕ್ಕೆ ಹೋಗೋದು ಅಂತಾ PUC ಯ ಗೆಳೆಯ ಸುಶೀಲ್ ಹಾಗು ಅವನ ಮಡದಿ ಬಿಂದು ಜೊತೆಗೂಡಿ, ಅವರ ಜೀಪಿನ ಹಿಂಭಾಗದಲ್ಲಿ ಕಣ್ಣು ಮುಚ್ಚಿ ಮಲಗಿದ್ದೆ. ಜೀಪು ನಿಂತುಕೋತು. "ಅಲ್ಲಿ ಕೋಡುಬಳೆ ಕವರ್ ಕೂಡ ಇದೇ ತಗೋ" ಅಂದಳು ಬಿಂದು ಪ್ರಿಯದರ್ಶಿನಿ ಮಹಾತಾಯಿ... ! ಸ್ವರ್ಗ..! ಅಂದುಕೊಂಡು ಕೋಡುಬಳೆ ಹಿಡ್ಕೊಂಡು ಕೆಳಗೆ ಇಳಿದು ಹೋದ್ವಿ.

ಇನ್ನೊಂದ್ ವಿಷಯ.. ಬಿಂದು ಜೀಪ್ ಓಡಿಸುತ್ತಿದ್ದಾಗ ಅವಳಿಗೆ ಇವನ american driving sessions ಗಳು..ಅವಳು ಓಡಿಸ್ತಾ ಇದ್ದ ಪರಿ!! ಇವೆಲ್ಲದರ ಮಧ್ಯೆ ನಾನಂತೂ ಜೀವ ಕೈಲಿ ಹಿಡಿದು ಕೂತಿದ್ದಂತೂ... ದೇವರಾಣೆ ನಿಜ! ಅಲ್ಲಿ ಹೇಳೋಕೆ ಧೈರ್ಯ ಬರಲಿಲ್ಲ ಅಷ್ಟೇ. ಆದರೆ ಬೆಂಗಳೂರಿನಲ್ಲಿ ಮನೆಯಿಂದ ಹೊರಡೋ ಮುಂಚೆ ಮರೆಯದೇ ಅಮ್ಮನಿಗೆ "ಹೋಗಿ ಬರ್ತೀನಮ್ಮಾ" ಅಂತಾ ಹೇಳಿ ಬಂದಿದ್ದ ಧೈರ್ಯ ಮಾತ್ರ ಇತ್ತು :)

ನನ್ನ ಮೇಲೆ ಅಪರಿಮಿತ ನಂಬಿಕೆಯಿಟ್ಟು ಕೇಳಿದ ಕಡೆಗೆಲ್ಲಾ ಯಾವುದೇ ಕಟ್ಟುಪಾಡುಗಳಿಲ್ಲದೇ, ಮುಕ್ತ ಮನಸ್ಸಿನಿಂದ, ಸ್ವಚ್ಛಂದವಾಗಿ ಹರಿಯಲು, ಹಾರಲು ಬಿಟ್ಟ ಅಮ್ಮ ಹಾಗೂ ಅಣ್ಣ (ಅಪ್ಪ) ನಿಗೆ ಅರ್ಪಿಸುತ್ತಾ...

ನಗು ನಗುತಾ ನಲಿ ನಲಿ...ಏನೇ ಆಗಲಿ..
--ಶರತ್

ವಿ. ಸೂ:ಏನ್ ಅನ್ನಿಸಿತು ಅಂತಾ ಬರೆದು ತಿಳಿಸಿ.. ಇಲ್ಲಾದರೂ ಸರಿ.. ಈಮೈಲ್ ನಲ್ಲಾದರೂ ಸರಿ.